ರಚನ: ಪುರಂದರದಾಸರು

ನಾರಾಯಣಾಯ  ನಮೋ  ನಾಗೇಂದ್ರಶಯನಾಯ
ನಾರದಾದ್ಯಖಿಳ  ಮುನಿನಮಿತ  ಚರಣಾಂಭೋಜ
ಸಾರಿದರೆ  ಪೊರೆದ  ಕಂಸಾರಿ  ರಕ್ಷಿಪುದಿಂದು  ಕಾರುಣ್ಯದಿಂದ ಒಲಿದು || ಪ ||

ಪಾಂಡ್ಯ ದೇಶದೊಳು  ಇಂದ್ರದ್ಯುಮ್ನನೆಂಬ ಭೂ
ಮಂಡಲಾಧಿಪನು  ವೈರಾಗ್ಯದಲಿ  ಹರಿಪಾದ
ಪುಂಡರೀಕದ  ಧ್ಯಾನದಿಂ  ಮಹಾತಪದೊಳಿರೆ  ಚಂಡತಾಪಸ  ಅಗಸ್ತ್ಯ  |
ಹಿಂಡು  ಶಿಷ್ಯರವೆರಸಿ  ಬರಲು  ಸತ್ಕರಿಸದಿರೆ
ಕಂಡು ಗಜಯೋನಿಯಲಿ ಜನಿಸು  ಹೋಗೆನುತ ಉ
ದ್ದಂದಡ ಶಾಪವನಿಟ್ಟು  ಮುನಿ  ಪೋದನಾಕ್ಷಣದಿ  ಶುಂಡಾಲನಾದಸರಸ || ೧ ||

ಕ್ಷೀರಸಾಗರತಡಿಯ  ಐದು  ಯೋಜನದ ವಿ
ಸ್ತಾರದಲಿ  ವರತ್ರಿಕೂಟಾದ್ರಿ  ಶೃಂಗತ್ರಯದ
ರಾರಾಜಿಸುತಲಿಪ್ಪರಜತ  ತಾಮ್ರ  ಧ್ವಜದ  ಮೇರುಸಮ  ಗಾಂಭೀರ್ಯದಿ |
ಪಾರಿಜಾತಾಂಭೋಜ  ತುಳಸಿ  ಮಲ್ಲಿಗೆ  ಜಾಜಿ
ಸೌರಭದೊಳಶ್ವತ್ಥಪೂಗ  ಪುನ್ನಾಗ  ಜಂ
ಬೀರಾದಿ  ತರುಗಲ್ಮ  ಖಗ  ಮೃಗಗಳೆಸೆವಲ್ಲಿ  ವಾರಣೇಂದ್ರನು ಮೆರೆದನು || ೨ ||

ಆನೆ  ಹೆಣ್ಣಾನೆ  ಮರಿಯಾನೆಗಳ ಸಹಿತ ಆ
ಕಾನನದಿ ನಲಿಯುತ್ತ  ಬೇಸಿಗೆಯ  ಬಿಸಿಲಿನಲಿ
ತಾ  ನೀರಡಿಸಿ  ಬಂದುದೊಂದು  ಸರಸಿಗೆ  ಸಲಿಲಪಾನಾಭಿಲಾಷೆಯಿಂದ |
ನಾನಾ  ಪ್ರಕಾರದಲಿ  ಜಲಕ್ರೀಡೆಯಾಡುತಿರೆ
ಏನಿದೆತ್ತಣ ರಭಸನಂದುಗ್ರ  ಕೋಪದಿಂ
ದಾ  ನೆಗಳು  ಬಾಯ್ತೆರೆದು  ನುಂಗಿಕೊಂಡಂಘ್ರಿಯನು  ಏನೆಂಬೆನಾಕ್ಷಣದೊಳು || ೩ ||

ಒತ್ತಿ  ಹಿಡಿದೆಳೆಯುತಿರೆ  ಎತ್ತಣದಿದೇನೆನುತ
ಮತ್ತಗಜರಾಜ  ಅವುಡೊತ್ತಿ  ಫೀಳಿಡುತಲೆಳ
ದೊತ್ತಿ  ತಂದುದು  ದಡಕೆ  ಮತ್ತೆ  ನಡುಮಡುವಿನೊಳಗೆತ್ತೆಳೆದುದಾ  ನೆಗಳವು |
ಇತ್ತಂಡವಿತ್ತು  ಕಾದಿತ್ತು  ಸಾವಿರವರುಷ
ವಿಸ್ತರಿಸಿತ್ತೇನೆಂಬೆ  ಮತ್ತಾ  ಗಜೇಂದ್ರಂಗೆ
ಸತ್ವ  ತಗ್ಗಿತು  ತನ್ನ  ಚಿತ್ತದೊಳು  ಧ್ಯಾನಿಸುತ  ಮತ್ತಾರು  ಗತಿಯನುತಲಿ || ೪ ||

ಬಂದುದಾ  ಸಮಯದಲಿ  ಹಿಂದೆ  ಮಾಡಿದ  ಸುಕೃತ
ದಿಂದ  ದಿವ್ಯ ಜ್ಞಾನ  ಕಣ್ದೆರದು  ಕೈ  ಮುಗಿದು
ವಂದಿಸಿದ  ಮನದೊಳರವಿಂದನಾಭಾಚ್ಯುತ  ಮುಕುಂದ  ಮುನಿವೃಂದವಂದ್ಯ  |
ಇಂದಿರಾರಮಣ  ಗೋವಿಂದ  ಕೇಶವ  ಭಕ್ತ
ಬಂಧು  ಕರುಣಾಸಿಂಧು  ತಂದೆ  ನೀ  ಸಲಹೆನ್ನ
ಬಂದು  ಸಿಲುಕಿದೆನು  ಬಲು  ದುಂದುಗದ  ಮಾಯಾಪ್ರಬಂಧದಿಂ  ನೆಗಳಿನಿಂದ || ೫ ||

ಪರಮಾತ್ಮ  ಪರಿಪೂರ್ಣ  ಪರಮೇಶ  ಪರತತ್ತ್ವ
ಪರತರ  ಪರಂಜ್ಯೋತಿ  ಪರಮಪಾವನಮುರ್ತಿ
ಉರುತರಾ  ಪರಬ್ರಹ್ಮ  ಆನಂದ  ಪರಮೇಷ್ಠಿ  ಪರಾತ್ಪರ  ಪರಮಪುರುಷ |
ನಿರುಪಮ  ನಿಜಾನಂದ  ನಿರ್ಭಯ  ನಿರಾವರಣ
ನಿರವಧಿಕ  ನಿರ್ಗುಣ  ನಿರಂಜನ  ನಿರಾಧಾರ
ನಿರವೇದ್ಯ  ನಿಸ್ಸಂಗ  ನಿಶ್ಚಿಂತ್ಯ  ನಿತ್ಯನೇ  ನೋಯುಸದೆ  ಸಲಹೆನ್ನನು || ೬ ||

ಇಂತೆನುತ  ಮೋರ್ಛೆಯಲಿ  ಗುಪಿತ  ಕಂಠಧ್ವನಿಯೊ
ಳಂತರಾತ್ಮಕನ  ನೆನೆಯುತ್ತಳುತ್ತಿರಲಿತ್ತ
ನಂತ  ಮಹಿಮನು  ಕೇಳಿ  ಕರುಣದಿಂದಾಕ್ಷಣಾನಂತಶಯನದಲೆದ್ದನು |
ಸಂತಪಿಸಿ  ಸಿರಿಮುಡಿಯು  ಗರುಡವಾಹನನಾಗಿ
ಚಿಂತೆ  ಬೇಡೇಳೆನುತ  ಅಭಯಹಸ್ತವನಿತ್ತೇ
ಕಾಂತ  ಭಕ್ತನ  ಬಳಗೆ  ಬಂದೆರಡು  ಕೈಯಿಂದ  ದಂತಿವರನನು  ನೆಗಹಿದ  || ೭ ||

ನೆಗಳ  ಬಾಯನು  ಚಕ್ರದಲಿ  ಸೀಳಿ  ಕರಿವರನ
ಉಗುವ  ಕರುಣದಲಿ  ಮೈದಡಹಲ್ಕಿ   ಗಜ  ಜನ್ಮ
ತೆಗದುದಾಕ್ಷಣದಿ  ಮಣಿಮಕರಕುಂಡಲದಿಂದ  ಮಿಗೆ  ಶೋಭಿಸುತಲೆಸೆದನು |
ವಿಗಡ  ದೇವಲ  ಋಷಿಯ  ಶಾಪದಲಿ  ಬಿದ್ದಿಳೆಗೆ
ಮಿಗೆ  ನಕ್ರನಾಗಿ  ಹೂಹೂ  ಎಂಬ  ಗಂಧರ್ವ
ಅಘಹರನ  ಕಂಡು  ನಿಜಗತಿಗೈದುದಮರರೋಳ್  ಮಿಗೆ  ಮೆರದುದೋಲೈಸುತ || ೮ ||

ಮಣಿಮಯ  ಕಿರೀಟಕುಂಡಲ  ಹಾರಕೌಸ್ತುಭದ
ಮಿನುಗುತಿಹ  ವೈಜಯಂತಿಯ  ಭೂಷಣಾಂಗದ
ಹಣೆಯ  ಕಸ್ತೂರಿತಿಲಕ  ನಾಮದಿಂದಸೆವುತಿಹ  ವರ  ಶಂಖ  ಚಕ್ರದಿಂದ |
ಝಣಝಣಿತ  ನೂಪುರದ  ದಂತ  ಪಂಕ್ತಿಯ  ಕೃಪೇ
ಕ್ಷಣದ  ಸಿರಿಮೋಗದ  ಪೀತಾಂಬರಾಲಂಕೃತದ
ಮಣಿದಾ  ಜಯ  ಜಯವೆಂಬ  ಸುರಸಿದ್ಧಸಾಧ್ಯ  ಸಂದಣಿಯೊಳಗೆ  ಹರಿ  ಮೆರೆದನು || ೯ ||

ಹರಿಸ್ತುತಿಯ  ಗೈದಂಘ್ರಿಕೆರಗಲಾ  ಭೂಪನಾ
ದರದಿಂದ  ಸತ್ಕರಿಸಿ  ಶರಧಿ  ಶ್ವೇತದ್ವೀಪ
ಗಿರಿಶೃಂಗ  ವಾರಾಶಿ  ತರುಶೇಷ  ವಾಲ್ಮೀಕಿಮುನಿ  ಧರಣಿ  ಧ್ರುವ  ಲಕ್ಷ್ಮಿಯು |
ಹರ  ಗಿರಿಜೆ  ವಿಧಿವಾಣಿ  ನಾರದ  ಪ್ರಹ್ಲಾದ
ಗರುಡ  ಗೋ  ವಿಪ್ರ  ಋಷಿ  ಗಂಗಾರ್ಕ  ಚಂದ್ರಾಗ್ನಿ
ಸಿರಿವತ್ಸ  ಶಂಖ  ಚಕ್ರಾದಿಯವತಾರಗಳ  ಸ್ಮರಿಸುವರ  ಕಾಯ್ದೆನೆಂದ || ೧೦ ||

ಅವನಿದನುದಯಕಾಲದೊಳೆದ್ದು  ನಿಜ  ಭಕ್ತಿ
ಭಾವಶುದ್ಧಗಳಿಂದ  ಪೇಳಿ  ಕೇಳುವ  ಜನರ
ಘಾವಳಿಯ  ಪರಿಹರಿಸಿ  ಸುಜ್ಞಾನ  ಪದವಿತ್ತು  ದೇಹಾವಸಾನದೊಳಗೆ |
ಶ್ರೀ  ವಾಸುದೇವನಾಜ್ಞಾಪಿಸಿ  ಗಜೇಂದ್ರ  ಸಹಿ
ತಾ  ವಿಹಂಗಾಧಿಪನನೇರಿ  ವೈಕುಂಠಕ್ಕೆ
ದೇವ  ಬಿಜಯಂಗೈದ  ಶ್ರೀಹರಿ  ಪುರಂದರವಿಠಲನು || ೧೧ ||
|| ಶ್ರೀಕೃಷ್ಣಾರ್ಪಣಮಸ್ತು ||

ವರ್ಗ: ಪುರಂದರದಾಸ ಸಾಹಿತ್ಯ